“ಕೆಲಸವಿಲ್ಲದೇ ಹಣ” – ವಕೀಲ ವೃತ್ತಿಯ ಭ್ರಮೆ.

ಎಸ್. ಬಸವರಾಜ್. ಹಿರಿಯ ವಕೀಲರು. ಸದಸ್ಯರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತು.


ವಕೀಲರ ವಲಯದಲ್ಲಿ ಸಾಮಾನ್ಯವಾಗಿ ಕೇಳುವ ಒಂದು ಮಾತು ಇದೆ:
“ಮೊದಲ 1 ರಿಂದ 5 ವರ್ಷ: ಕೆಲಸ ಮಾತ್ರ, ಹಣ ಇಲ್ಲ.
5 ರಿಂದ 15 ವರ್ಷ: ಕೆಲಸ ಮತ್ತು ಹಣ.
15 ವರ್ಷಗಳ ನಂತರ: ಹಣ ಮಾತ್ರ, ಕೆಲಸ ಇಲ್ಲ.”

1.
ಇದು ಪ್ರೋತ್ಸಾಹದಂತೆ ಅಥವಾ ಗುರಿ ಸಾಧಿಸುವ ಮಾತಿನಂತೆ ತೋರುತ್ತದೆ. ಆದರೆ ವಾಸ್ತವದಲ್ಲಿ, ಇದು ಬಹುಪಾಲು ಮಿಥ್ಯೆ. ವಕೀಲ ವೃತ್ತಿ ಎನ್ನುವುದು ಒಂದು ಹಂತ ತಲುಪಿದ ಮೇಲೆ ಸುಲಭವಾಗಿ ಸಾಗುವ ವ್ಯವಹಾರವಲ್ಲ. ಕಾನೂನು ವೃತ್ತಿ ಗಂಭೀರ, ಶ್ರಮಯುತ, ಬದಲಾವಣೆಗೊಳಗಾಗುವ ವೃತ್ತಿ. ಇದರ ಯಶಸ್ಸು ಜೀವನಪೂರ್ತಿ ನಿರಂತರ ಪರಿಶ್ರಮ, ಶಿಸ್ತು ಮತ್ತು ಬೌದ್ಧಿಕ ತೀಕ್ಷ್ಣತೆಗೆ ಅವಲಂಬಿತ.
ವಕೀಲರು ಎಷ್ಟೇ ಹಿರಿಯರಾಗಲಿ, ನಿರ್ಲಕ್ಷ್ಯ ವೃತ್ತಿಗೆ ಹಾನಿಕರ. ಸತ್ಯವೇನೆಂದರೆ ವಕೀಲರು ಶ್ರಮಪೂರ್ವಕವಾಗಿ, ನಿರಂತರವಾಗಿ ಮತ್ತು ನಿಷ್ಟೆಯಿ0ದ ಕೆಲಸ ಮಾಡದಿದ್ದರೆ, ಅವರಿಗೆ ಕೆಲಸವೂ ಬರುವುದಿಲ್ಲ, ಹಣವೂ ಬರುವುದಿಲ್ಲ.
2. ಪ್ರತಿಷ್ಠಿತ ಹಿರಿಯ ವಕೀಲರು ಇಂದಿಗೂ ದಿನಕ್ಕೆ 14 ರಿಂದ 18 ಗಂಟೆಗಳು ದುಡಿಯುತ್ತಾರೆ: ಸಂಶೋಧನೆ, ವಾದ ಸಿದ್ಧತೆ, ಓದುವುದು ಇತ್ಯಾದಿ. ಅವರ ಯಶಸ್ಸು ಸುಮ್ಮನೆ ಬಂದದ್ದಲ್ಲ; ಅದು ದಶಕಗಳ ಕಾಲದ ನಿರಂತರ ಪರಿಶ್ರಮದ ಫಲ.
3. ಒಮ್ಮೆ ವೃತ್ತಿಯಲ್ಲಿ ಆಲಸ್ಯ, ಆರಾಮ ಅಥವಾ ನಿರ್ಲಕ್ಷ್ಯ ಪ್ರವೇಶಿಸಿದರೆ, ಅಭಿವೃದ್ಧಿಯ ದಿಕ್ಕು ನಿಧಾನವಾಗಿ ಕುಸಿಯಲು ಪ್ರಾರಂಭಿಸುತ್ತದೆ. ಪ್ರತಿಭೆ ಮೊದಲ ಬಾಗಿಲು ತೆರೆಯಬಹುದು, ಆದರೆ ದೀರ್ಘಕಾಲದ ಪರಿಶ್ರಮವೇ ಆ ಬಾಗಿಲನ್ನು ತೆರೆದಿಟ್ಟಿರುತ್ತದೆ.
ಶ್ರಮ ಮಾತ್ರ ಸಾಕಾಗುವುದಿಲ್ಲ. ನಿರಂತರ ಅಧ್ಯಯನದ ಅಗತ್ಯ ಖ0ಡಿತ ಬೇಕು.
4. ಕಾನೂನು ಕ್ಷೇತ್ರ ನಿರಂತರವಾಗಿ ಬದಲಾಗುತ್ತಿದೆ. ಇದರ ಮೇಲೆ ಪರಿಣಾಮ ಬೀರುವ ಅಂಶಗಳು:
ಹೊಸ ನ್ಯಾಯನಿರ್ಣಯಗಳು ಮತ್ತು ಕಾನೂನು
ಕಾನೂನು ತಿದ್ದುಪಡಿ ಮತ್ತು ಸಂವಿಧಾನ ಪರಿಷ್ಕರಣೆ
ವೇಗವಾದ ತಾಂತ್ರಿಕ ಪ್ರಗತಿ
ವ್ಯಾಪಾರ, ಸಮಾಜ ಮತ್ತು ಸಂವಿಧಾನದ ಮೌಲ್ಯಗಳಲ್ಲಿ ಬದಲಾವಣೆ
5. ಅಧ್ಯಯನ ನಿಲ್ಲಿಸಿದ ವಕೀಲರು ನಿಧಾನವಾಗಿ ಹಿನ್ನಡೆಯುತ್ತಾರೆ. ಆದರೆ ನಿರಂತರವಾಗಿ ತಮ್ಮ ಜ್ಞಾನ ವಿಸ್ತರಿಸುವವರು ವಿಚಾರಣೆ ಕ್ರಮ, ಕಾನೂನು, ಸೈಬರ್ ಕಾನೂನು, AI ನಿಯಂತ್ರಣೆ, ಡೇಟಾ ಸಂರಕ್ಷಣಾ ಕಾನೂನುಗಳಂತಹ ಹೊಸ ಕ್ಷೇತ್ರಗಳಲ್ಲಿ ಜಗತ್ತಿನಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ.
6. ಮೂರು ದಶಕಗಳ ಹಿಂದಿನ ಕಾನೂನು ವೃತ್ತಿ ಇಂದಿನಂತಿರಲಿಲ್ಲ. ಬದಲಾವಣೆಗಳಿಗೆ ವಿರೋಧ ತೋರಿದವರು ಹಂತಹಂತವಾಗಿ ಹಿಂದಕ್ಕೆ ಸರಿದರು. ಆದರೆ ಬದಲಾವಣೆ ಒಪ್ಪಿಕೊಂಡವರು, ಕಲಿತು ಮುಂದುವರೆದವರು, ಇಂದು ಅತ್ಯುತ್ತಮ ಸ್ಥಾನದಲ್ಲಿ ಇದ್ದಾರೆ.
7. ಜಾಗತೀಕರಣ ಮತ್ತು ಮಾರುಕಟ್ಟೆಯ ಬದಲಾವಣೆಗಳ ಪರಿಣಾಮ
ಲಿಬರಲೈಸೇಶನ್, ಗ್ಲೋಬಲೈಸೇಶನ್ ಮತ್ತು ಪ್ರೈವೇಟೈಸೇಶನ್ (LPG) ಬಂದ ನಂತರ ಕಾನೂನು ವೃತ್ತಿಯಲ್ಲಿ ಕ್ರಾಂತಿ ಸಂಭವಿಸಿತು. ಅಂತರಾಷ್ಟ್ರೀಯ ಕಂಪನಿಗಳ ಪ್ರವೇಶದಿಂದಾಗಿ:
ವೃತ್ತಿಪರ ನೈತಿಕತೆ
ಸ್ಪರ್ಧಾತ್ಮಕತೆ
ಬಿಲ್ಲಿಂಗ್ ವ್ಯವಸ್ಥೆಗಳು
ಗ್ರಾಹಕ ನಿರ್ವಹಣಾ ಮಾನದಂಡಗಳು
ಎಲ್ಲವೂ ಬದಲಾಗಿವೆ.
8. ಇಂದಿನ ಕಾನೂನು ವೃತ್ತಿ ಕೇವಲ ನ್ಯಾಯಾಲಯಕ್ಕೆ ಸೀಮಿತವಾಗಿಲ್ಲ. ಕಾನೂನು ವೃತ್ತಿಯ ಅವಕಾಶ, ವ್ಯಾಪ್ತಿ ಮತ್ತು ಪ್ರತಿಷ್ಠೆ ಇತಿಹಾಸದಲ್ಲೇ ಅತಿ ಉನ್ನತ ಮಟ್ಟಕ್ಕೆ ಏರಿದೆ. ಆದರೆ ಅದರ ಜವಾಬ್ದಾರಿ, ಕಠಿಣತೆ ಮತ್ತು ಸ್ಪರ್ಧೆಯ ಮಟ್ಟವೂ ಅದೇ ತಾಳಿನಲ್ಲಿ ಹೆಚ್ಚಾಗಿದೆ.
9. ಕಾನೂನು ವೃತ್ತಿ ಕೇವಲ ಉದ್ಯೋಗವಲ್ಲ; ಅದು ಜ್ಞಾನ, ಕೌಶಲ್ಯ, ಶಿಸ್ತು ಮತ್ತು ನೈತಿಕತೆಯ ಜೀವನಮೂಲಕ ಪ್ರಯಾಣ. ವಕೀಲರಿಗೆ ಹೊಸದೇ ಕಲಿಯದೇ ಇರುವ ಹಂತವೇ ಇಲ್ಲ.

ಯಶಸ್ಸು ವರ್ಷಗಟ್ಟಲೆ ಕಾಯುವವರಿಗೆ ಅಲ್ಲ; ಪ್ರತಿಕ್ಷಣ ಬೆಳೆಯುವವರಿಗೆ ಸಿಗುತ್ತದೆ.
ಪರಿಶ್ರಮಕ್ಕೆ ಪರ್ಯಾಯವಿಲ್ಲ.
ಗೌರವಕ್ಕೆ ಅವಧಿ ಪರವಾನಗಿ ಇಲ್ಲ.
ಕಲಿಕೆಗೆ ನಿವೃತ್ತಿ ಇಲ್ಲ.
ವಕೀಲರು ವಿದ್ಯಾರ್ಥಿಗಳು — ಐದು ವರ್ಷಗಳವರೆಗೆ ಅಲ್ಲ, ಹದಿನೈದು ವರ್ಷಗಳವರೆಗೆ ಅಲ್ಲ — ಜೀವನಪೂರ್ತಿ.

Published by rajdakshalegal

Senior Advocate, High Court of Karnataka, Bengaluru

Leave a comment