ರೈತರಿಗೆ ಪ್ರಯೋಜನವಾಗದ ಕೃಷಿ ಕೃಷಿ ಕಾಯ್ದೆಗಳ ಅಡಿಯಲ್ಲಿನ ವಿವಾದ ಪರಿಹಾರ ವಿಧಾನ.

ಎಸ್. ಬಸವರಾಜ್, ವಕೀಲರು, ದಕ್ಷ ಲೀಗಲ್

ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಹಾಗೂ ೨. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಒಪ್ಪಂದ ಮತ್ತು ರೈತ ಸೇವೆಗಳ ಕಾಯ್ದೆಇವೆರಡರ ಅಡಿ ರೈತ ಮತ್ತು ವ್ಯಾಪಾರಿಗಳ ಮದ್ಯೆ ಉ೦ಟಾಗುವ ವಿವಾದಗಳನ್ನು ಬಗೆಹರಿಸುವ ಅಧಿಕಾರ ಸರ್ಕಾರಿ ಅಧಿಕಾರಿಗಳಿಗೆ ಕೊಟ್ಟಿರುವುದು ಸರಿಯಲ್ಲ ಎ೦ದು ನನ್ನ ಅನಿಸಿಕೆ.

ಕರ್ನಾಟಕ ಉಚ್ಚ ನ್ಯಾಯಾಯಲಯದ ಇತ್ತೀಚಿನ ಪೂರ್ಣಪೀಠದ ತೀರ್ಪು ಅಸಿಸ್ಟೆ೦ಟ್ ಕಮೀಷನರ್ ಮತ್ತು ಡೆಪೂಟಿ ಕಮಿಷನರ್ ಇವರ ಮು೦ದೆ ಭೂ ಮಾಲೀಕರು ದಶಕಗಳ ಕಾಲ ಪರದಾಡುವ ಬಗ್ಗೆ ಅತ್ಯ೦ತ ಖೇದ ವ್ಯಕ್ತಪಡಿಸಿದೆ. ಸರ್ಕಾರಿ ಅಧಿಕಾರಿಗಳ ಕೆಲಸದ ಒತ್ತಡ, ಮ೦ತ್ರಿಗಳ ಸಭೆ ಮತ್ತು ಅಧಿಕಾರಶಾಹಿಯ ಮೂಲಭೂತವಾದ ಅಸಡ್ಡೆಯಿ೦ದಾಗಿ ಸಾವಿರಾರು ರೈತರು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇ೦ತಹ ಸನ್ನಿವೇಶದಲ್ಲಿ ರೈತ ಹಾಗೂ ವ್ಯಾಪಾರಿಗಳ ವಿವಾದಗಳನ್ನೂ ಈ ಅಧಿಕಾರಿಗಳಿಗೆ ವಹಿಸಿರುವುದು ಖ೦ಡಿತ ಸರಿಯಲ್ಲ. ಕಾಯಿದೆಯಲ್ಲಿ ವಿವಾದ ಬಗೆಹರಿಸಲು ಕಾಲಮಿತಿ ನಿಗದಿಪಡಿಸಿದ್ದರೂ, ಇದನ್ನು ಪಾಲಿಸುವುದು ಸಾದ್ಯವೇ ಇಲ್ಲ ಎ೦ಬುದು ನಮಗೆ ಅನುಭವದ ಮೂಲಕ ತಿಳಿದಿದೆ. ಈ ಎರಡು ಕಾಯಿದೆಗಳಲ್ಲಿ ವಿವಾದ ಪರಿಹಾರ ಕ್ರಮವನ್ನು ನೋಡೋಣ.

1. ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ-2020. Farmers’ Produce Trade and Commerce (Promotion and Facilitation) Act, 2020. ರೈತ ಮತ್ತು ವ್ಯಾಪಾರಿ ನಡುವಿನ ವಹಿವಾಟಿನಿಂದ ಯಾವುದೇ ವಿವಾದ ಉಂಟಾದರೆ ಅವರು ಸಂಧಾನದ ಮೂಲಕ ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಪಡೆಯಬಹುದು ಆದರೆ ಇದಕ್ಕಾಗಿ ಅಂತಹ ವಿವಾದವನ್ನು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ Sub-Divisional Magistrate ಇವರಿಗೆ ಸಲ್ಲಿಸಬೇಕಾಗುತ್ತದೆ. ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಈ ವಿವಾದವನ್ನು ಅವರೇ ನೇಮಕ ಮಾಡಿದ ಒಬ್ಬ ಅಧ್ಯಕ್ಶ ಮತ್ತು ನಾಲ್ಕು ಸದಸ್ಯರಿರುವ ಒ೦ದು ಸಂಧಾನ ಮಂಡಳಿಗೆ ವರ್ಗಾಯಿಸುತ್ತಾರೆ.

ಸಂಧಾನ ಮಂಡಳಿಯ ಅಧ್ಯಕ್ಷರು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಇವರ ಕೈಗೆಳಗೆ ಕೆಲಸ ಮಾಡುವ ಅಧಿಕಾರಿಯಾಗಿರುತ್ತಾರೆ. ರೈತನ ಹಾಗೂ ವ್ಯಾಪಾರಿಯ ಪರ ಸಮನಾಗಿ ಸದಸ್ಯರನ್ನು ಅವರ ಶಿಫಾರಸು ಮೇರೆಗೆ ನೇಮಕ ಮಾಡಬೇಕಾಗುತ್ತದೆ. ಏಳು ದಿನಗಳ ಒಳಗಾಗಿ ಶಿಫಾರಸ್ ಮಾಡದಿದ್ದರೆ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಇವರೇ ಸದಸ್ಯರನ್ನು ನೇಮಕ ಮಾಡಬಹುದು.

ವಿವಾದವು ಸಂಧಾನ ಮಂಡಳಿಯ ಮು೦ದೆ ತೀರ್ಮಾನವಾದಲ್ಲಿ ಅದಕ್ಕೆ ಅನುಗುಣವಾಗಿ ಇತ್ಯರ್ಥದ ಜ್ಞಾಪಕ ಪತ್ರವನ್ನು ತಯಾರಿಸಿ ಸಹಿ ಮಾಡಲಾಗುವುದು. ಈ ರೀತಿ ಆದ ಇತ್ಯರ್ಥವು ಉಭಯ ವ್ಯಕ್ತಿಗಳಿಗೂ ಖಡ್ಡಾಯವಾಗಿ ಅನ್ವಯವಾಗುತ್ತವೆ.

ಉಭಯ ವ್ಯಕ್ತಿಗಳು ವಿವಾದವನ್ನು ಮೇಲೆ ಹೇಳಿದ೦ತೆ ಮೂವತ್ತು ದಿನಗಳಲ್ಲಿ ಪರಿಹರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅವರು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರಿಗೆ ಮತ್ತೆ ಮೊರೆಹೋಗಬೇಕು. ಆಗ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಇವರು “ಉಪ-ವಿಭಾಗೀಯ ಪ್ರಾಧಿಕಾರ” “Sub-Divisional Authority” ಆಗಿ ಕಾರ್ಯ ನಿರ್ವಹಿಸಿ ವಿವಾದವನ್ನು ಇತ್ಯರ್ಥ ಮಾಡಬೇಕಾಗುತ್ತದೆ.

ಉಪ-ವಿಭಾಗೀಯ ಪ್ರಾಧಿಕಾರವು ಮೂವತ್ತು ದಿನಗಳಲ್ಲಿ ತ್ವರಿತ ರೀತಿಯಲ್ಲಿ summary manner ವಿವಾದವನ್ನು ಇತ್ಯರ್ಥ ಮಾಡಬೇಕಾಗುತ್ತದೆ. ಉಪ-ವಿಭಾಗೀಯ ಪ್ರಾಧಿಕಾರವು ಉಭಯ ವ್ಯಕ್ತಿಗಳಿಗೂ ತಿಳುವಳಿಕೆ ನೀಡಿ (೧) ವಿವಾದದ ಹಣ ವಸೂಲಿಮಾಡುವ, (೨) ದ೦ಡ ವಿಧಿಸುವ ಮತ್ತು (೩) ವ್ಯಾಪಾರಿಯು ಇನ್ನು ಮು೦ದೆ ರೈತರ ಮಾಲುಗಳನ್ನು ಕಾಲಮಿತಿಯಲ್ಲಿ ವ್ಯವಹರಿಸದ೦ತೆ ನಿರ್ಬ೦ದ ಹೇರುವ, ಆದೇಶಗಳನ್ನು ಮಾಡಬಹುದು.

ಉಪ-ವಿಭಾಗೀಯ ಪ್ರಾಧಿಕಾರದ ಆದೇಶದಿಂದ ಬಾದೆಗೊ೦ಡ ವ್ಯಕ್ತಿಯು ಮೂವತ್ತು ದಿನಗಳ ಒಳಗೆ ಮೇಲ್ಮನವಿ ಪ್ರಾಧಿಕಾರ ಅ೦ದರೆ (ಕಲೆಕ್ಟರ್ ಅಥವಾ ಹೆಚ್ಚುವರಿ ಕಲೆಕ್ಟರ್) ಮು೦ದೆ ಮೇಲ್ಮನವಿ ಸಲ್ಲಿಸಬಹುದು. ಅ೦ತಹ ಮೇಲ್ಮನವಿಯನ್ನು ಮೂವತ್ತು ದಿನಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಉಪ-ವಿಭಾಗೀಯ ಪ್ರಾಧಿಕಾರ ಅಥವಾ ಮೇಲ್ಮನವಿ ಪ್ರಾಧಿಕಾರದ ಪ್ರತಿಯೊಂದು ಆದೇಶವು ಸಿವಿಲ್ ನ್ಯಾಯಾಲಯದ ತೀರ್ಪಿನ ಬಲವನ್ನು ಹೊಂದಿರುತ್ತದೆ ಮತ್ತು ಅದನ್ನು ಆ ರೀತಿ ಜಾರಿಗೊಳಿಸಬಹುದು ಮತ್ತು ಭೂ ಕ೦ದಾಯದ ಬಾಕಿ ಮೊತ್ತದ೦ತೆ ವಸೂಲಿ ಮಾಡಬಹುದು.

ಯಾವುದೇ ಸಿವಿಲ್ ನ್ಯಾಯಾಲಯವು ಯಾವುದೇ ಮೊಕದ್ದಮೆ ಅಥವಾ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯವ್ಯಾಪ್ತಿಯನ್ನು ಹೊಂದಿರುವುದಿಲ್ಲ. ಆದ್ದರಿ೦ದ ಮೇಲೆ ಹೇಳಿದ೦ತೆ ಹೊರಡಿಸಲಾದ ಆದೇಶಗಳ ಮೇಲೆ ಉಚ್ಚ ನ್ಯಾಯಾಲಯಕ್ಕೆ ಮಾತ್ರ ಸ೦ವಿದಾನದ ೨೨೬ ರ ಅಡಿಯಲ್ಲಿ ರಿಟ್ ಅರ್ಜಿ ಸಲ್ಲಿಸಬಹುದಾಗಿದೆ ಎ೦ದು ನನ್ನ ಅಭಿಪ್ರಾಯ.

2. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಒಪ್ಪಂದ ಮತ್ತು ರೈತ ಸೇವೆಗಳ ಕಾಯ್ದೆ2020 Farmers (Empowerment and Protection) Agreement on Price Assurance and Farm Services Act, 2020. ಪ್ರತಿ ಕೃಷಿ ಒಪ್ಪಂದವು ಸಂಧಾನ ಪ್ರಕ್ರಿಯೆಯನ್ನು ಹೊ೦ದಿರಬೇಕು. ಒಪ್ಪಂದಕ್ಕೆ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ರಾಜಿ ಮಂಡಳಿಯ ರಚನೆಯನ್ನೂ ನಮೂದಿಸಿರಬೇಕು. ರಾಜಿ ಮಂಡಳಿಯಲ್ಲಿ ಪಕ್ಷಗಳ ಪ್ರಾತಿನಿಧ್ಯವು ನ್ಯಾಯಯುತ ಹಾಗೂ ಸಮತೋಲಿತವಾಗಿರಬೇಕು.

ಯಾವುದೇ ಕೃಷಿ ಒಪ್ಪಂದದಿಂದ ಉಂಟಾಗುವ ವಿವಾದವನ್ನು ಮೊದಲು ಸಮಾಲೋಚನೆಗೋಸ್ಕರ ಕೃಷಿ ಒಪ್ಪಂದದ ನಿಬಂಧನೆಗಳ ಪ್ರಕಾರ ರಚಿಸಲಾದ ಮಂಡಳಿ ಮು೦ದೆ ಬಗೆಹರಿಸಲು ಎಲ್ಲ ಪ್ರಯತ್ನವನ್ನು ಮಾಡಬೇಕು. ಈ ರೀತಿ ತೀರ್ಮಾನವಾಗುವ ವಿವಾದಗಳನ್ನು ಇತ್ಯರ್ಥದ ಜ್ಞಾಪಕ ಪತ್ರವನ್ನು ಅದಕ್ಕೆ ಅನುಗುಣವಾಗಿ ತಯಾರಿಸಿ ಸಹಿ ಮಾಡಬೇಕು. ಈ ರೀತಿ ಆದ ಇತ್ಯರ್ಥವು ಉಭಯ ವ್ಯಕ್ತಿಗಳಿಗೂ ಖಡ್ಡಾಯವಾಗಿ ಅನ್ವಯವಾಗುತ್ತವೆ.

ಒ೦ದು ವೇಳೆ ಕೃಷಿ ಒಪ್ಪಂದವು ರಾಜಿ ಪ್ರಕ್ರಿಯೆಯನ್ನು ಒಳಗೊ೦ಡಿರದಿದ್ದರೆ ಅಥವಾ ಸ೦ದಾನ ಶುರುವಾದ ಮೂವತ್ತು ದಿನಗಳಲ್ಲಿ ರಾಜಿಯಾಗದಿದ್ದರೆ ವಿವಾದಗಳನ್ನು ಬಗೆಹರಿಸಲು ವ್ಯಕ್ತಿಗಳು ಉಪ-ವಿಭಾಗೀಯ ಪ್ರಾಧಿಕಾರವಾಗಿರುವ ಸಂಬಂಧಪಟ್ಟ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಬೇಕಾಗುತ್ತದೆ. ಈ ರೀತಿ ವಿವಾದವನ್ನು ಸ್ವೀಕರಿಸಿದ ನಂತರ, ಉಪ-ವಿಭಾಗೀಯ ಪ್ರಾಧಿಕಾರವು, ಅಂತಹ ವಿವಾದವನ್ನು ಬಗೆಹರಿಸಲು ರಾಜಿ ಮಂಡಳಿಯನ್ನು ನೇಮಕ ಮಾಡಬಹುದು ಅಥವಾ ತಾನೇ ತೀರ್ಮಾನ ಮಾಡಬಹುದು. ಸಮಂಜಸವಾದ ಅವಕಾಶವನ್ನು ನೀಡಿದ ನಂತರ ದಂಡ ಮತ್ತು ಬಡ್ಡಿಯೊಂದಿಗೆ ವಿವಾದದಲ್ಲಿರುವ ಮೊತ್ತವನ್ನು ಮರುಪಡೆಯಲು ಆದೇಶ ಮಾಡಬಹುದು ಮತ್ತು (೧) ಮೊತ್ತವನ್ನು ಪಾವತಿಸಲು ಪ್ರಾಯೋಜಕರು ವಿಫಲರಾದರೆ ದಂಡವನ್ನು ಒಂದೂವರೆ ಪಟ್ಟು ವಿಸ್ತರಿಸಬಹುದು (೨) ಮೊತ್ತವನ್ನು ಮರುಪಡೆಯಲು ರೈತನ ವಿರುದ್ಧ ಆದೇಶವಿದ್ದರೆ (ಮುಂಗಡ ಪಾವತಿ ಅಥವಾ ಒಳಹರಿವಿನ ವೆಚ್ಚ)  ಆಗ ಅಂತಹ ಮೊತ್ತವು ನಿಜವಾದ ವೆಚ್ಚವನ್ನು ಮೀರಬಾರದು. (೩) ಕೃಷಿ ಒಪ್ಪಂದವು ಈ ಕಾಯಿದೆಗೆ ವಿರುದ್ಧವಾಗಿದ್ದರೆ ಅಥವಾ ರೈತನ ತಪ್ಪು ಕೈ ಮೀರಿದ ಕಾರಣಗಳಿ೦ದ (ಅತಿವೃಶ್ಟಿ, ಪ್ರವಾಹ, ಬರಗಾಲ ಇತ್ಯಾದಿ) ಆದಲ್ಲಿ ರೈತನ ವಿರುದ್ದ ಯಾವುದೇ ಆದೇಶವನ್ನೂ ಹೊರಡಿಸಬಾರದು.

ಉಪ-ವಿಭಾಗೀಯ ಪ್ರಾಧಿಕಾರವು ಹೊರಡಿಸಿದ ಪ್ರತಿಯೊಂದು ಆದೇಶವೂ ಸಿವಿಲ್ ನ್ಯಾಯಾಲಯದ ತೀರ್ಪಿನ ಬಲ ಹೊ೦ದಿರುತ್ತದೆ. ಮತ್ತು ಆ ರೀತಿಯೇ ಜಾರಿಗೊಳಿಸಬಹುದು. ಆದರೂ ಇದು ಮೇಲ್ಮನವಿಗೆ ಒಳಪಟ್ಟಿರುತ್ತದೆ. ಉಪ-ವಿಭಾಗೀಯ ಪ್ರಾಧಿಕಾರದ ಆದೇಶದಿಂದ ಬಾದಿತರಾದ ಯಾವುದೇ ವ್ಯಕ್ತಿಯು ಕಲೆಕ್ಟರ್ ಅಥವಾ ಕಲೆಕ್ಟರ್ ನಾಮನಿರ್ದೇಶನ ಮಾಡುವ ಮೇಲ್ಮನವಿ ಪ್ರಾಧಿಕಾರಕ್ಕೆ ಆದೇಶದ ಮೂವತ್ತು ದಿನಗಳೊಳಗಾಗಿ ಮನವಿ ಸಲ್ಲಿಸಬಹುದು. ಇ೦ತಹ ಮನವಿಯನ್ನು ಮೂವತ್ತು ದಿನಗಳಲ್ಲಿ ತೀರ್ಮಾನಿಸಬೇಕಾಗುತ್ತದೆ. ಮೇಲ್ಮನವಿ ಪ್ರಾಧಿಕಾರವು ಹೊರಡಿಸಿದ ಪ್ರತಿಯೊಂದು ಆದೇಶವೂ ಸಿವಿಲ್ ನ್ಯಾಯಾಲಯದ ತೀರ್ಪಿನ ಬಲ ಹೊ೦ದಿರುತ್ತದೆ. ಮತ್ತು ಆ ರೀತಿಯೇ ಜಾರಿಗೊಳಿಸಬಹುದು. ಆದೇಶದ ಹಣವನ್ನು ಭೂ ಕ೦ದಾಯದ ಬಾಕಿ ಮೊತ್ತದ೦ತೆ ವಸೂಲಿ ಮಾಡಬಹುದು.

ವಿವಾದಗಳನ್ನು ನಿರ್ಧರಿಸುವಾಗ ಉಪ-ವಿಭಾಗೀಯ ಪ್ರಾಧಿಕಾರ ಅಥವಾ ಮೇಲ್ಮನವಿ ಪ್ರಾಧಿಕಾರ ಸಿವಿಲ್ ನ್ಯಾಯಾಲಯದ ಎಲ್ಲಾ ಅಧಿಕಾರಗಳನ್ನು ಹೊಂದಿವೆ ಅ೦ದರೆ ಪ್ರಮಾಣವಚನಕ್ಕೆ ಸಾಕ್ಷಿಗಳ ಹಾಜರಾತಿಯನ್ನು ಜಾರಿಗೊಳಿಸುವುದು, ದಾಖಲೆಗನ್ನು ಹಾಜರಿಪಡಿಸಲು ಆದೇಶ ಇವನ್ನು ಹೊರಡಿಸಬಹುದು.

ಯಾವುದೇ ಕಾರಣಕ್ಕೂ ಹಣ ವಸೂಲಿಗಾಗಿ ರೈತನ ಕೃಷಿ ಭೂಮಿಯ ವಿರುದ್ದ ಯಾವುದೇ ಕ್ರಮ ಕೈಗೊಳ್ಳಬಾರದು.

ಇಷ್ಟೆಲ್ಲ ಇದ್ದರೂ ಸರ್ಕಾರಿ ಅಧಿಕಾರಿಗಳ ಬಳಿ ಮತ್ತೆ ರೈತರನ್ನು ಅಲೆಸುವುದು ಸರಿಯಾದ ಕ್ರಮವಲ್ಲ.

ಕೊನೆಯದಾಗಿ ಹೇಳುವುದೆ೦ದರೆ – ಕ೦ಪೆನಿಗಳ ವಿಚಾರದಲ್ಲಿ ಇರುವ ಸೆಬಿ, ಸ್ತಿರಾಸ್ತಿ ರಿಯಲ್ ಎಸ್ಟೇಟ್ ವಿಚಾರದಲ್ಲಿ ಇರುವ ರೇರಾ ಮತ್ತು ಗ್ರಾಹಕ ಸ೦ರಕ್ಷಣೆ ವಿಚಾರದಲ್ಲಿ ಇರುವ ಗ್ರಾಹಕ ವೇದಿಕೆ ಈ ರೀತಿ ಯಾವುದೂ ಕೂಡ ಕಾಯಿದೆಗಳಲ್ಲಿ ಇಲ್ಲ. ಈ ರೀತಿಯ ಒ೦ದು ಪ್ರಬಲವಾದ ವೇದಿಕೆಗಳು ಜಿಲ್ಲಾ ಮಟ್ಟದಲ್ಲಿ ಖ೦ಡಿತವಾಗಿಯೂ ಬೇಕಾಗಿವೆ. ಮತ್ತು ಸರ್ಕಾರಿ ಅಧಿಕಾರಿಗಳ ಬಳಿ ಮತ್ತೆ ರೈತರನ್ನು ಅಲೆಸುವುದ೦ದು ಖ೦ಡಿತವಾಗಿಯೂ ತಪ್ಪಬೇಕಾಗಿದೆ.

ಎಸ್. ಬಸವರಾಜ್, ವಕೀಲ ದಕ್ಷ ಲೀಗಲ್, ಹಾಗು ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್.

Published by rajdakshalegal

Senior Advocate, High Court of Karnataka, Bengaluru

Leave a comment